ಪ್ರಭಾವ ವಲಯ - 
 	ಒಂದು ರಾಜ್ಯ ಅನ್ಯದೇಶೀಯ ಪ್ರದೇಶವೊಂದರ ಮೇಲೆ ಆರ್ಥಿಕ, ರಾಜಕೀಯ, ಸೈನಿಕ ಅಥವಾ ಬೇರೆ ಯಾವುದಾದರೂ ರೀತಿಯ ನಿಯಂತ್ರಣದ ಹಕ್ಕನ್ನು ಸ್ಥಾಪಿಸಿದಾಗ ಆ ಪ್ರದೇಶ ಆ ರಾಜ್ಯದ ಪ್ರಭಾವ ವಲಯವೆನಿಸಿಕೊಳ್ಳುತ್ತದೆ. ಮತ್ತೆ ಯಾವ ನಾಡಿಗೂ ಅಲ್ಲಿ ಪ್ರವೇಶಕ್ಕೆ ಅವಕಾಶ ಇಲ್ಲದಂಥ ಸ್ಥಿತಿ ಏರ್ಪಡಬಹುದು. ಈ ಹಕ್ಕಿಗೆ ಪ್ರಭಾವಶಾಲಿ ರಾಷ್ಟ್ರದ ಘೋಷಣೆ ಅಥವಾ ಬಲ ಮಾತ್ರ ಕಾರಣವಿರಬಹುದು, ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರಗಳ ನಡುವೆ ಒಪ್ಪಂದ ಇರಬಹುದು. 1493ರ ಪೋಪನ ಕಟ್ಟಳೆಗೆ ಅನುಸಾರವಾಗಿ ಸ್ಪೇನ್ ಪಶ್ಚಿಮಾರ್ಧಗೋಳವನ್ನೂ ಪೋರ್ಚುಗಲ್ ಪೂರ್ವಾರ್ಧಗೋಳವನ್ನೂ ತಮ್ಮ ತಮ್ಮ ಪ್ರಭಾವ ವಲಯಗಳೆಂದು ಪರಿಗಣಿಸಿದ್ದುವು. 17-19ನೆಯ ಶತಮಾನಗಳಲ್ಲಿ ಬ್ರಿಟನ್, ಫ್ರಾನ್ಸ್, ಹಾಲೆಂಡ್, ಜರ್ಮನಿ ಮುಂತಾದ ದೇಶಗಳು ರಾಜ್ಯ ವಿಸ್ತೀರ್ಣ ಯತ್ನದಲ್ಲಿ ಯುದ್ಧದ ಜೊತೆಗೆ ಪ್ರಭಾವ ವಲಯ ಒಪ್ಪಂದಗಳನ್ನು ಮಾಡಿಕೊಂಡಿದ್ದುವು. ಈ ಕಾಲದಲ್ಲಿ ಈಜಿಪ್ಟ್, ಮೊರಾಕೋ, ಆಫ್ಘಾನಿಸ್ತಾನ, ಟಿಬೆಟ್ ಮೊದಲಾದ ದುರ್ಬಲ ರಾಜ್ಯಗಳು ಒಂದಲ್ಲ ಒಂದು ಪ್ರಬಲರಾಜ್ಯದ ಪ್ರಭಾವ ವಲಯಗಳಾಗಿದ್ದುವು. ಬೇರೆ ಯಾವ ದೇಶವೂ ಇಡೀ ಅಮೆರಿಕ ಖಂಡದ ರಾಜ್ಯಗಳ ವ್ಯವಹಾರಗಳಲ್ಲಿ ತಲೆಹಾಕಕೂಡದೆಂದು ಅಮೆರಿಕ ಸಂಯುಕ್ತ ಸಂಸ್ಥಾನ ವಾದ ಹೂಡಿತ್ತು. ಚೀನದಲ್ಲೂ ಪಶ್ಚಿಮದ ರಾಷ್ಟ್ರಗಳು ಪ್ರಭಾವ ವಲಯಗಳನ್ನು ಸ್ಥಾಪಿಸಿಕೊಂಡಿದ್ದುವು. ಒಂದನೆಯ ಮಹಾಯುದ್ಧದೊಂದಿಗೆ ಪ್ರಭಾವವಲಯಗಳು ಅಂತರರಾಷ್ಟ್ರೀಯ ಕಾನೂನಿನ ದೃಷ್ಟಿಯಿಂದ ಪ್ರಾಮುಖ್ಯವನ್ನು ಕಳೆದುಕೊಂಡುವು.
(ಎಸ್.ವಿ.ಡಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ